ಜಾನ್, ಸಂತ - 
ಯೇಸುಕ್ರಿಸ್ತನ ಹನ್ನೆರಡು ಮಂದಿ ಶಿಷ್ಯರ ಪೈಕಿ ಆಪ್ತತ್ರಯರಲ್ಲಿ ಒಬ್ಬ. ಈತ ಜೆಬೇದೀ ಎಂಬಾತನ ಮಗ. ಜೇಮ್ಸ್ ಈತನ ಸಹೋದರ. ಇವರು ಯೇಸುಕ್ರಿಸ್ತ ಕರೆದೊಡನೆಯೇ ವಿಳಂಬವಿಲ್ಲದೆ ಅವನ ಅನುಯಾಯಿಗಳಾದರು. ಪೀಟರ್, ಜೇಮ್ಸ್ ಮತ್ತು ಜಾನ್ ಮಾತ್ರ ಯೇಸುವಿನ ಜೀವನದ ಕೆಲವು ವಿಶಿಷ್ಟ ಘಟನೆಗಳು ನಡೆಯುವಾಗ ಹಾಜರಿದ್ದರು. ಜೈರಸನ ಮಗಳನ್ನು ಜೀವಂತಗೊಳಿಸಿದುದು, ಯೇಸುವಿನ ಭವ್ಯ ರೂಪಾಂತರ, ಗೆತ್ಸೆಮನಿ ತೋಪಿನಲ್ಲಿ ಯಾತನೆಯನ್ನು ಅನುಭವಿಸಿದುದು ಈ ಘಟನೆಗಳೆಲ್ಲ ಇವರಿಗೆ ಸಂಬಂಧಿಸಿದುವು. ಯೇಸುವಿನ ಬೋಧನೆಯನ್ನು ತಿರಸ್ಕರಿಸಿದ ಸಮೇರಿಯದ ಪಟ್ಟಣಗಳ ಮೇಲೆ ಅಗ್ನಿವರ್ಷವನ್ನು ಕರೆಯುವುದಕ್ಕೂ ಜೇಮ್ಸ್ ಮತ್ತು ಜನ ಸಿದ್ದರಿದ್ದರು. ಇದಕ್ಕೋಸ್ಕರವೇ ಸಿಡಿಲಿನ ಮರಿಗಳು ಎಂದು ಯೇಸು ಇವರನ್ನು ಕರೆದಂತಿದೆ. ಯೇಸುವಿನ ಸಾಮ್ರಾಜ್ಯದಲ್ಲಿ ಉನ್ನತ ಪದವಿಯನ್ನು ತಮಗೆ ಕೊಡಬೇಕೆಂದಾಗ ಕಷ್ಟ ಹಾಗೂ ಸಾವನ್ನು ಅಪ್ಪುವುದಕ್ಕೆ ಸಿದ್ಧರಾಗಿರಬೇಕೆಂದು ಯೇಸು ಇವರಿಗೆ ಮಾರ್ನುಡಿದಿದ್ದ.

	ಬೈಬಲಿನ ಇನ್ನಿತರ ಕಡೆಗಳಲ್ಲಿ ಜಾನ್ ಮತ್ತು ಪೀಟರನ ಉಲ್ಲೇಖಗಳಿವೆ. ಕೊನೆಯ ಭೋಜನವನ್ನು ಸಿದ್ಧಪಡಿಸಲು ಹೋದವರು ಇವರೇ; ಇವರಿಬ್ಬರಿಗೆ ದೇವಾಲಯದ ಬಳಿ ಹೆಳವನ ಭೇಟಿಯಾಯಿತು; ಅನಂತರ ದೇವಾಲಯದವರಿಂದ ದಸ್ತಗಿರಿಯಾಗಿ ಆಮೇಲೆ ಬಿಡುಗಡೆಯಾಯಿತು. ಸುಮೇರಿಯಾಕ್ಕೆ ಪವಿತ್ರಾತ್ಮನನ್ನು ಕೊಡುವುದಕ್ಕೋಸ್ಕರ ಇವರಿಬ್ಬರೂ ಹೋಗಿದ್ದರು. ಯೇಸುವಿನ ಮರಣಾನಂತರ ಜೆರೂಸಲೇಮಿನ ಧರ್ಮಸಭೆಯಲ್ಲಿ ಪ್ರಧಾನ ಪಾತ್ರವನ್ನು ಜಾನ್ ವಹಿಸಿದ್ದ. ಇವಿಷ್ಟು ಬೈಬಲಿನಿಂದ ತಿಳಿದುಬರುವ ಅಂಶಗಳು. ಮುಂದೆ ಇವರ ಬಗ್ಗೆ ತಿಳಿಯಲು ಸಂಪ್ರದಾಯವನ್ನು ಅನುಸರಿಸಬೇಕಾಗುತ್ತದೆ. ಜಾನ್ ತನ್ನ ಕೊನೆಯ ದಿನಗಳನ್ನು ಎಫಜûಸ್ ನಲ್ಲಿ ಕಳೆದನೆಂದು ತಿಳಿದುಬರುತ್ತದೆ. ಈತನದು ಎನ್ನಲಾದ ಸುವಾರ್ತೆ, ಧರ್ಮಪತ್ರಗಳು ಮತ್ತು ಪ್ರಕಟಣೆ (ಅಪೋಕಲಿಪ್ಸ್) ಗ್ರಂಥಗಳ ಕರ್ತೃತ್ವ ಜಟಿಲವಾದ ಪ್ರಶ್ನೆ. ಮೂಲ ತಿರುಳು ಮತ್ತು ಪ್ರೇರಣೆ ಜಾನನ ಸೃಷ್ಟಿ, ಭಾಷಾ ವೈವಿಧ್ಯ, ವಿನ್ಯಾಸ, ಸಂಪಾದನೆ ಹಲವು ಶಿಷ್ಯರ ಕೈಯಲ್ಲಿ ಆಗಿರುವುದು ಸಾಧ್ಯವೆಂಬುದು ವಿದ್ವಾಂಸರ ಅಭಿಪ್ರಾಯ. 	

	ಜಾನನ ಬಗೆಗೆ ಹಲವು ದಂತಕಥೆಗಳು ಹರಡಿದ್ದವು. ಚಿಕ್ಕ ಮಕ್ಕಳೇ ಒಬ್ಬರನ್ನೊಬ್ಬರು ಪ್ರೀತಿಸಿರಿ-ಎಂದು ಪದೇ ಪದೇ ಹೇಳುತ್ತಿದ್ದ ಎಂಬ ಕಥೆಯ ಪ್ರಾಮಾಣ್ಯ ಏನೇ ಇರಲಿ, ಜಾನನ ಸ್ವಭಾವಕ್ಕೆ, ಸುವಾರ್ತೆಗಳಿಗೆ ಅದು ಸರಿಯಾಗಿ ಹೊಂದಿಕೊಳ್ಳುತ್ತದೆ. ಇವನ ಸುವಾರ್ತೆಯ ಪ್ರಸ್ತಾವನೆಯಲ್ಲಿರುವ ದೇವಶಾಸ್ತ್ರದ ಆಳವನ್ನು ಮನಗಂಡು ಊಧ್ರ್ವಮುಖಿ ಗಿಡುಗನ ಸಂಕೇತವನ್ನು ಇವನಿಗೆ ಅಳವಡಿಸುವ ಕ್ರಮ ಆರಂಭವಾಗಿತ್ತು.
ಜಾನನ ಸುವಾರ್ತೆ : ಬೈಬಲಿನ ಹೊಸ ಒಡಂಬಡಿಕೆಯಲ್ಲಿರುವ ನಾಲ್ಕು ಸುವಾರ್ತೆಗಳಲ್ಲಿ ಕೊನೆಯದು. ಜಾನನಬೋಧನೆ ಹಾಗೂ ಉಪದೇಶಗಳು ಇದರಲ್ಲಿವೆ. ಇದರ ಮೂಲಸಂಪ್ರದಾಯ ಲಿಖಿತರೂಪದಲ್ಲಿ ಇದ್ದಿರುವುದು ಸಾಧ್ಯ. ಜಾನನ ಒಬ್ಬ ಅಥವಾ ಹಲವು ಶಿಷ್ಯರು ಕೆಲವು ಸೇರ್ಪಡೆಗಳೊಂದಿಗೆ ಇದನ್ನು ಪುನಃ ಯೋಜಿಸಿ ಸಂಪಾದಿಸಿದರು. ಸುವಾರ್ತೆ ಬರೆಹಕ್ಕಿಳಿದ ಕಾಲ ಕ್ರಿ.ಶ.110ಕ್ಕಿಂತ ಈಚಿನದಲ್ಲವೆಂದೂ ಪ್ರಾಯಶಃ ಎಫೆಜûಸ್‍ನಲ್ಲಿ ರಚಿತವಾಯಿತೆಂದೂ ವಿದ್ವಾಂಸರ ಅಭಿಪ್ರಾಯ. ಆದ್ದರಿಂದ ಜಾನನ ಮೂಲ ಸಂಪ್ರದಾಯ ಈ ಕಾಲದ ಮೊದಲೇ ಪ್ರಚಾರದಲ್ಲಿತ್ತೆಂಬುದು ಸ್ಪಷ್ಟ.

	ಮ್ಯಾತ್ಸ್ಯು, ಮಾರ್ಕ್ ಮತ್ತು ಲೂಕ್_ಈ ಮೂರು ಸಕೃದ್ವೀಕ್ಷ್ಯ ಸುವಾರ್ತೆಗಳು (ಲಿಖಿತ ಇಲ್ಲವೇ ಕನಿಷ್ಠ ಪಕ್ಷ ಅವುಗಳ ಮೂಲ ಸಂಪ್ರದಾಯಗಳ ರೂಪದಲ್ಲಿ) ಜಾನನಿಗೆ ಪರಿಚಿತವಿದ್ದಂತೆ ತೋರುತ್ತದೆ. ಈ ಮೂರು ಸುವಾರ್ತೆಗಳಲ್ಲಿ ಹೇಳಿದ ಚಾರಿತ್ರಿಕ ವಿವರಗಳನ್ನು ತಾನು ಹೇಳಬೇಕೆಂಬ ಉದ್ದೇಶಕ್ಕಿಂತ ಯೇಸುವಿನ ಸ್ವಭಾವ ಹಾಗೂ ಉದ್ದಿಷ್ಟ ಕಾರ್ಯಗಳನ್ನು ಪರಿಚಯಿಸಿಕೊಡುವ ಹಾಗೂ ಅವುಗಳನ್ನು ಕುರಿತಂತೆ ತನ್ನ ವಿಶಿಷ್ಟ ವ್ಯಾಖ್ಯಾನವನ್ನು ನಿರೂಪಿಸುವ ಉದ್ದೇಶ ಜಾನನಿಗಿತ್ತು. ಮುಖ್ಯವಾಗಿ ಕ್ರೈಸ್ತರನ್ನು-ಯೆಹೂದ್ಯ ಹಾಗೂ ಯೆಹೂದ್ಯೇತರರನ್ನು-ದೃಷ್ಟಿಯಲ್ಲಿಟ್ಟುಕೊಂಡು ಯೇಸುವಿನ ಜೀವನದ ಘಟನೆಗಳಲ್ಲಿ ತನ್ನ ಉದ್ದೇಶಕ್ಕೆ ಬೇಕಾಗುವ, ಅರ್ಥವತ್ತಾದಂಥವನ್ನು ಆರಿಸಿ ಜಾನ್ ತನ್ನ ಬೋಧನೆಯನ್ನು ರೂಪಿಸಿದ. ಜಾನನ ಉಪದೇಶ ಕಾಲದಲ್ಲಿ ಧರ್ಮಸಭೆಯಲ್ಲಿರುವ ಅಂಶಗಳೆಲ್ಲವೂ ಯೇಸುವಿನ ಜೀವನ ಘಟನೆಗಳಲ್ಲಿ ಸಂಕೇತಿಸಲ್ಪಟ್ಟಿದ್ದವು; ಧರ್ಮಸಭೆಯ ಜೀವನ, ಕೃಪಾವಾಹಿನಿಗಳಾದ ಸಂಸ್ಕಾರಗಳಿಗೆ ಯೇಸುವಿನ ಜೀವನ ಘಟನೆಗಳು, ಮಾತು, ಉಪದೇಶಗಳು ತಳಹದಿಯಾಗಿವೆ-ಇವೇ ಮೊದಲಾದ ವಿಷಯಗಳನ್ನು ಜಾನನ ಸುವಾರ್ತೆ ಪ್ರತಿಪಾದಿಸುತ್ತದೆ.

	21 ಅಧ್ಯಾಯಗಳಿರುವ ಜಾನನ ಸುವಾರ್ತೆಯ ಸ್ವರೂಪವನ್ನು ಸ್ಥೂಲವಾಗಿ ಹೀಗೆ ಹೇಳಬಹುದು :

	1 ಪ್ರಸ್ತಾವನೆ-ಸುವಾರ್ತೆಯ ಮುಖ್ಯ ಆಶಯಗಳ ಉಲ್ಲೇಖ ; 2 ಪವಾಡಗಳ ಗ್ರಂಥ-ಹಳೆಯ ಒಡಂಬಡಿಕೆಯ ಪದ್ಧತಿಗಳಾದ ಶುದ್ಧೀಕರಣ, ದೇವಾಲಯ, ಆರಾಧನಾ ವಿಧಿ ಇತ್ಯಾದಿಗಳ ಸ್ಥಾನದಲ್ಲಿ ಹೊಸ ಒಡಂಬಡಿಕೆಯ ಹೊಸ ಪದ್ಧತಿಗಳು ಸ್ಥಾಪಿತವಾಗುತ್ತವೆ. ಹಳೆಯ ಹಬ್ಬಗಳು ಹೊಸ ಸಂಸ್ಥಾಪನೆಗಳಿಗೆ ಅನುವು ಮಾಡಿಕೊಡುತ್ತವೆ; ಜೀವ-ಬೆಳಕು ಆಶಯಗಳು; ಸತ್ತ ಲಾಜರಸನನ್ನು ಜೀವಂತಗೊಳಿಸಿದುದು; 3 ವೈಭವದ ಗ್ರಂಥ-ಯೇಸು ಉಗ್ರ ದಂಡನೆಗಳನ್ನು ಸಹಿಸಿ ಸಾವನ್ನಪ್ಪುವುದು; ವೈಭವದಿಂದ ಜೀವಂತನಾಗಿ ಏಳುವುದು; ಸ್ವರ್ಗಾರೋಹಣ; ಪವಿತ್ರಾತ್ಮನನ್ನು ಶಿಷ್ಯರ ಮೇಲೆ ಕಳಿಸುವುದು; 4 ಹಿನ್ನುಡಿ : ಪುನರುತ್ಥಾನ ದರ್ಶನಗಳು, ಅಂದಿನ ಧರ್ಮಸಭೆಗೆ ಇವುಗಳಲ್ಲಿ ಆಸಕ್ತಿ ಇತ್ತು.

	ಜಾನನ ಸುವಾರ್ತೆಯ ಕೆಲವು ವೈಶಿಷ್ಟಗಳು ಹೀಗಿವೆ.

	ಸಂಭಾಷಣೆಗಳಲ್ಲಿ ಜನ ಯೇಸುವನ್ನು ಮೊದಲಬಾರಿ ಅರ್ಥಮಾಡಿಕೊಳ್ಳುವುದಿಲ್ಲ. ಸಂಭಾಷಣೆಗಳ ಉಪದೇಶಗಳ ವಿಷಯ ರೂಪಕಗಳ ಮೂಲಕ ಗೋಪ್ಯವಾಗಿರುತ್ತಿತ್ತು. ಅರ್ಥಕ್ಲೇಶ ಉಂಟಾದಾಗ ತನ್ನ ಬೋಧನೆಯನ್ನು ಇನ್ನೂ ಆಳವಾಗಿ ವಿವರಿಸುವುದು ಯೇಸುವಿಗೆ ಸಾಧ್ಯವಾಗುತ್ತಿತ್ತು. ಕ್ರಮೇಣ ಸಂಭಾಷಣೆ ಇದ್ದದ್ದು ಏಕವಾಕ್ಯವಾಗುತ್ತದೆ. ಇದು ಸಂಪಾದಕೀಯ ಕೆಲಸವಾಗಿರಬಹುದಾದರೂ ಯೇಸುವಿನ ಬೋಧನೆಯ ಕಾಲದೇಶಗಳ ಇತಿಮಿತಿಯನ್ನು ಮೀರಿಸಿ ಶಾಶ್ವತವಾಗಿ ನಿಲ್ಲುವಂಥದು ಎಂಬ ಭಾವನೆ ಈ ಮೂಲಕ ಬರುತ್ತದೆ.

	ಕೆಲವೆಡೆ ಯೇಸುವಿನ ವಿರೋಧಿಗಳು ತಿರಸ್ಕಾರಪೂರ್ವಕ ಹೇಳಿದ ಮೂದಲಿಕೆಯ ವ್ಯಂಗ್ಯದ ಮಾತುಗಳು ಅವರಿಗೆ ತಿಳಿಯದೆಯೇ ನಿಜವಾಗಿರುತ್ತವೆ ಮತ್ತು ವಿಶೇಷ ಪ್ರಮಾಣದಲ್ಲಿ ಅರ್ಥವಂತಿಕೆಯನ್ನು ಪಡೆದಿರುತ್ತವೆ.

	ಹಲವು ಕಥನಗಳ ಅರ್ಥದ ಹಲವು ಸ್ತರಗಳನ್ನು ಓದುಗ ಕಂಡುಕೊಳ್ಳಬೇಕೆಂಬುದು ಜಾನನ ಉದ್ದೇಶ. ಯೇಸುವಿನ ಮಾತುಗಳನ್ನು ಅಂದಿನ ಭಾಷೆ, ಹಿನ್ನೆಲೆಗೆ ಸರಿಯಾಗಿ ಜನ ಅರ್ಥಮಾಡಿದ್ದರು, ನಿಜ. ಆದರೆ ಆ ತರುವಾಯ ಅಸ್ತಿತ್ವಕ್ಕೆ ಬಂದ ಧರ್ಮಸಭೆ ಇವೇ ಮಾತುಗಳಲ್ಲಿದ್ದ ಆಳವೂ ಆಧ್ಯಾತ್ಮಿಕವೂ ಆದ ಅರ್ಥವನ್ನು ಗ್ರಹಿಸುತ್ತಿತ್ತು. ಈ ಆಳವಾದ ಅರ್ಥವನ್ನು ಓದುಗ ಕೂಡ ಗ್ರಹಿಸಬೇಕೆಂಬುದು ಸುವಾರ್ತೆಯ ಲೇಖಕನ ಅಭಿಪ್ರಾಯ.

	ಸಕೃದ್ವೀಕ್ಷ್ಯ ಸುವಾರ್ತೆಗಳಲ್ಲಿ ಅಂತಿಮ ನಾಲ್ಕು ವಿಷಯಗಳು (ಸಾವು, ತೀರ್ಪು, ಸ್ವರ್ಗ, ನರಕ) ಕಾಲ ಮುಕ್ತಾಯಗೊಳ್ಳುವಾಗ ಬರುವಂಥವು ಎಂದಿದೆ. ಜಾನನಲ್ಲಿ ಇವು ಆಗಲೇ ಆರಂಭವಾಗಿವೆ ಎಂದು ಹೇಳಿದೆ.
ಜಾನನ ಧರ್ಮಪತ್ರಗಳು: ಜಾನ್ ಎಂಬಾತ ಬರೆದನೆನ್ನಲಾದ ಬೈಬಲಿನ ಹೊಸ ಒಡಂಬಡಿಕೆಯಲ್ಲಿರುವ, ಮೂರು ಪತ್ರಗಳು, ಜಾನನ ಸುವಾರ್ತೆಯನ್ನು ಬರೆದ ಜೆಬೇದೀಯ ಮಗನಾದ ಜಾನನೇ ಈ ಮೂರು ಪತ್ರಗಳ ಕರ್ತೃ ಎಂಬ ಪುರಾತನ ನಂಬಿಕೆಯನ್ನು ಆಧುನಿಕ ವಿದ್ವಾಂಸರು ಪುರಸ್ಕರಿಸಿದ್ದಾರೆ. ಜಾನನ ಸುವಾರ್ತೆಗೂ ಜಾನನ ಒಂದನೆಯ ಪತ್ರಕ್ಕೂ ಅನೇಕ ಸಾದೃಶ್ಯಗಳಿವೆ. ಒಂದನೆಯ ಪತ್ರದಲ್ಲಿ ಲೇಖಕ ತನ್ನ ಹೆಸರನ್ನು ಹೇಳಿಕೊಂಡಿಲ್ಲ, ಎರಡು ಮತ್ತು ಮೂರನೆಯ ಪತ್ರಗಳಲ್ಲಿ ಪರಸ್ಪರ ಸಾದೃಶ್ಯಗಳಿವೆ. ಹಿರಿಯನೊಬ್ಬ (ಪ್ರೆಸ್ಬಿಟರ್) ಇವನ್ನು ಬರೆದಿರುವನು-ಎಂದು ಹೇಳಿದೆ. ಇವೆರಡು ಪತ್ರಗಳು ತೀರ ಚಿಕ್ಕವು ಮತ್ತು ಧರ್ಮಸಿದ್ಧಾಂತದ ದೃಷ್ಟಿಯಲ್ಲಿ ಹೊಸತೇನನ್ನೂ ಇವು ಹೇಳುವುದಿಲ್ಲವಾದುದರಿಂದ ಇವನ್ನು ಕಾಲ್ಪನಿಕವಾಗಿ ಸೃಷ್ಟಿಸುವುದಕ್ಕಾಗಲಿ ಜಾನನಿಗೆ ಆರೋಪಿಸುವುದಕ್ಕಾಗಲಿ ಕಾರಣವಿಲ್ಲ. ಹೀಗೆ ಮೂರು ಪತ್ರಗಳ ಕರ್ತೃ ಜಾನ್-ಎಂದರೆ ಇಲ್ಲಿಯ ಮೂಲ ಬೋಧನೆಗಳು ಅವನವು. ಲೆಕ್ಕಣಿಗರು, ಶಿಷ್ಯ-ಸಂಪಾದಕರು ಬೇರೆ ಬೇರೆಯಾಗಿರುವುದು ಸಾಧ್ಯ.

	ಎಫೆಜûಸ್ ಪ್ರದೇಶದಲ್ಲಿ ಧರ್ಮಸಭೆಯ ಹಲವು ಸ್ಥಳೀಯ ಸಭೆಗಳಿದ್ದವು. ಚರ್ಚುಗಳೆಂದು ಇವನ್ನು ನಿರ್ದೇಶಿಸುವ ಕ್ರಮವಿತ್ತು. ಜಾನನ ಪತ್ರಗಳು ಈ ಚರ್ಚುಗಳಿಗೆ ಕಳಿಸಿದಂಥವು. ಮೊದಲ ಪತ್ರ ಹಲವು ಚರ್ಚುಗಳಿಗೆ ಕಳಿಸಿದ ಉಪದೇಶಾತ್ಮಕವಾದ ಸುತ್ತೋಲೆ. ಇದ್ದದ್ದರಲ್ಲಿ ಸುದೀರ್ಘವಾದ ಪತ್ರವಿದು. ಪಾಲನ ಪತ್ರಗಳಲ್ಲಿ ಮತ್ತು ಜಾನನ ಎರಡನೆಯ ಮತ್ತು ಮೂರನೆಯ ಪತ್ರಗಳಲ್ಲಿ ಕಾಣುವ ಪತ್ರಲೇಖನ ಕ್ರಮ ಇಲ್ಲಿಲ್ಲ. ಎರಡನೆಯ ಪತ್ರವನ್ನು ಮಾನಿನಿಯೊಬ್ಬಳನ್ನು (ಲೇಡಿ ಎಲೆಕ್ಟ್) ಉದ್ದೇಶಿಸಿದಂತೆ ಬರೆದಿದೆ. ಮಾನಿನಿ ಎಂಬುದು ಒಂದು ಚರ್ಚೆಗೆ ಸಂಕೇತವಾಗಿ ಬಳಸಿದ ಪದ. ಮೂರನೆಯ ಪತ್ರವನ್ನು ಗೇಯಸ್ ಎಂಬುವನನ್ನು ಮತ್ತು ಅವನಿರುವ ಚರ್ಚನ್ನು ಉದ್ದೇಶಿಸಿದಂತೆ ಬರೆದಿದೆ. ಗೇಯಸ್ ಜಾನನಿಗೆ ಪರಿಚಿತನಾಗಿದ್ದವ.

ಪಪೈರಸ್‍ನ ಒಂದು ಹಾಳೆಯಷ್ಟು ಪ್ರಮಾಣದಲ್ಲಿದ್ದ ಎರಡನೆಯ ಮತ್ತು ಮೂರನೆಯ ಪತ್ರಗಳ ವಿಚಾರವಾಗಿ ಎರಡನ್ನೂ ಒಬ್ಬನೇ ಲೆಕ್ಕಣಿಗ ಹೆಚ್ಚು ಕಡಿಮೆ ಒಂದೇ ಕಾಲದಲ್ಲಿ ಬರೆದಿರಬೇಕೆಂದಷ್ಟೇ ಹೇಳಬಹುದು. ಮೊದಲನೆಯ ಪತ್ರ ಜಾನನ ಸುವಾರ್ತೆಗೆ ವ್ಯಾಖ್ಯಾನದಂತಿದೆ ಎಂಬ ವಾದಕ್ಕೆ ಈಗ ಮನ್ನಣೆ ಕಡಿಮೆ. ಜಾನನ ಸುವಾರ್ತೆಗೆ ಮುಂಚಿತವಾಗಿಯೇ ಇದನ್ನು ಬರೆದದ್ದು ಎಂದು ಆಂತರಿಕ ಆಧಾರಗಳ ಮೇಲೆ ಹೇಳಬೇಕಾಗಿದೆ. ಜಾನನ ಸುವಾರ್ತೆಗೂ ಮೊದಲನೆಯ ಪತ್ರಕ್ಕೂ ಇರುವ ಸಾದೃಶಗಳಲ್ಲಿ ಹೆಚ್ಚಿನ ಖಚಿತತೆ, ಸ್ಪಷ್ಟತೆ ಮತ್ತು ಪರಿಪಕ್ವತೆ ಸುವಾರ್ತೆಯಲ್ಲಿ ಕಂಡುಬರುತ್ತದೆ. ಇವೆರಡರಲ್ಲಿದ್ದ ದೇವಶಾಸ್ತ್ರ ಚಿಂತನ ಹಾಗೂ ಶೈಲಿಯನ್ನು ಪರಿಶೀಲಿಸಿದರೆ ಈ ಅಂಶ ವ್ಯಕ್ತವಾಗುತ್ತದೆ. ಮೊದಲನೆಯ ಪತ್ರ ಸಾರ್ವತ್ರಿಕವೂ, ಉಪದೇಶಾತ್ಮಕವೂ ಆಗಿದ್ದರೂ ಉದ್ದೇಶಿತ ಚರ್ಚಿನವರಿಗೂ ಜಾನನಿಗೂ ಇರುವ ವೈಯಕ್ತಿಕ ಸಂಬಂಧವನ್ನು ಸೂಚಿಸುವ `ನನ್ನ ಮಕ್ಕಳೆ` ಎಂಬ ಸಂಬೋಧನಾ ರೂಪವನ್ನು ಮೊದಲನೆಯ ಪತ್ರದಲ್ಲಿ ಗುರುತಿಸಬಹುದು. ನಂಬಿಕೆಯ ಮತ್ತು ನಡವಳಿಕೆಯ ವಿಷಯಗಳಲ್ಲಿ ಠಕ್ಕ ಉಪದೇಶಗಳು ಲೇಖಕನ ಮಕ್ಕಳನ್ನು ತಪ್ಪು ದಾರಿಗೆಳೆಯುತ್ತಾರೆ. ಅಂಥವರನ್ನು ಖಂಡಿಸಿ, ಚರ್ಚುಗಳಿಗೆ ಯಥೋಚಿತವಾದ ಉಪದೇಶವನ್ನು ನೀಡುವುದೇ ಈ ಪತ್ರದ ಉದ್ದೇಶ. ಈ ಉಪದೇಶಿಗಳು ಕ್ರೈಸ್ತಮತೀಯರೇ, ದೇವರನ್ನು ಕುರಿತಂತೆ ಅಸಾಧಾರಣ ಪರಿಜ್ಞಾನ ತಮಗಿದೆ ಎಂದವರು ಹೇಳಿಕೊಳ್ಳ್ಳುತ್ತಿದ್ದರು. ಇತರ ಕ್ರೈಸ್ತಬಂಧುಗಳನ್ನು ದೂರವಿರಿಸಿ ಹೀಯಾಳಿಸುತ್ತಿದ್ದರು. ಇದೇ ಅವರೆಸಗಿದ ಮಹಾಪಾಪ. ಯೇಸು ನಿಜವಾದ ಕ್ರಿಸ್ತನಲ್ಲ ಎಂದು ಸಂಪ್ರದಾಯ ವಿರೋಧಿ ವಾದವನ್ನು ಮಂಡಿಸಿದ ಸೆರಿಂತಸ್ ಎಂಬವನ ಬೋಧನೆಯ ಬೀಜಗಳೂ ಎಫೆಜûಸ್ ಕ್ರೈಸ್ತರಲ್ಲಿ ಬಿತ್ತನೆಯಾಗಿದ್ದಿರಬಹುದು. ಈ ಬೋಧನೆಯನ್ನು ವಿರೋಧಿಸುವ ಉದ್ದೇಶವೂ ಜಾನನಿಗಿತ್ತೆಂದು ಊಹಿಸಲಾಯಿತು.

ಸ್ವೇಚ್ಛೆಯಾಗಿ ಪಾಪಕೃತ್ಯದಲ್ಲಿ ತೊಡಗುವವರು ಯೇಸುಕ್ರಿಸ್ತನಲ್ಲ ಎನ್ನುವವರು ದೇವರನ್ನು ಪ್ರೀತಿಸುವುದಿಲ್ಲ: ಪರರನ್ನೂ ಪ್ರೀತಿಸುವುದು ಕ್ರೈಸ್ತ ಧರ್ಮದ ಪರಮ ನಿಯಮ: ಈ ನಿಯಮವನ್ನು ಉಲ್ಲಂಘಿಸುವವ ದೇವರನ್ನು ಪ್ರೀತಿಸುವುದಿಲ್ಲ. ಈ ತತ್ತ್ವಗಳನ್ನು ಅನ್ವಯಿಸಿ ಲೇಖಕನ ಮಕ್ಕಳು ಠಕ್ಕ ಉಪದೇಶಿಗಳನ್ನು ಎದುರಿಸಬೇಕೆಂದು, ಪರೀಕ್ಷಿಸಬೇಕೆಂದು, ಹೀಗೆ ತಮ್ಮ ಧರ್ಮನಿರ್ದುಷ್ಟತೆಯನ್ನೂ ಕಾಪಾಡಿಕೊಳ್ಳಬೇಕೆಂದು ಮೊದಲ ಪತ್ರದಲ್ಲಿ ಹೇಳಿದೆ. 

ಅದೇ ಪತ್ರದಲ್ಲಿ ಜೊಹಾನೈನ್‍ಕೊಮಾ ಎಂಬ ಪಾಠಭಾಗವಿದೆ ಪರಮತ್ರಿತ್ವದ ಮೂರು ವ್ಯಕ್ತಿಗಳನ್ನು ಹೆಸರೆತ್ತಿ ಸೂಚಿಸುವ ಈ ಭಾಗ ಪ್ರಾಚೀನ ಹಸ್ತಪ್ರತಿಗಳಲ್ಲಿಲ್ಲ. 5 : 8 ಭಾಗಕ್ಕೆ ವ್ಯಾಖ್ಯಾನರೂಪದಲ್ಲಿ ಹುಟ್ಟಿ ಕ್ರಮೇಣ ಲ್ಯಾಟಿನ್ ಹಸ್ತಪ್ರತಿಗಳಲ್ಲಿ ಸೇರಿಕೊಂಡ ಭಾಗವಿದು.

ಎರಡನೆಯ ಪತ್ರದ ಉದ್ದೇಶ ಹೆಚ್ಚು ಕಡಿಮೆ ಮೊದಲನೆ ಪತ್ರದ ಉದ್ದೇಶವನ್ನೇ ಹೋಲುತ್ತದೆ. ಉದ್ದೇಶಿತ ಚರ್ಚಿನಲ್ಲಿ ಕೆಲವರಾದರೂ ಬೆಳಕಿನಲ್ಲಿ ನಡೆಯುತ್ತಾರೆ ಎಂದು ಸಂತೋಷಪಟ್ಟ ಜಾನ್ ಉಳಿದವರೂ ಸರಿಯಾದ ಪಥದಲ್ಲಿ ಮುಂದುವರಿಯಬೇಕೆಂದು ಹೇಳುತ್ತಾನೆ. ಮೂರನೆಯ ಪತ್ರದಲ್ಲಿ ಗೇಯಸ್ ಎಂಬಾತ ಧರ್ಮಪ್ರಚಾರಕರನ್ನು ಬರಮಾಡಿ ಸತ್ಕರಿಸಿದುದಕ್ಕಾಗಿ ಜಾನ್ ಮೆಚ್ಚಿಗೆಯನ್ನು ವ್ಯಕ್ತಪಡಿಸುತ್ತಾನೆ. ಡಯಾಟ್ರೆಫಿಸ್ ಎಂಬ ಧರ್ಮಾಧಿಕಾರಿ ಜಾನನ ಅಧಿಕಾರವನ್ನು ಒಪ್ಪುತ್ತಿರಲಿಲ್ಲವೆಂದೂ ಆತನ ಔದ್ಧತ್ಯವನ್ನು ಕಂಡು ಜಾನ್ ಅಪ್ರೀತನಾಗಿದ್ದನೆಂದೂ ಈ ಪತ್ರದಿಂದ ತಿಳಿದುಬರುತ್ತದೆ.
(ಇ.ಎನ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ